ನಾಗೇಶ್‌ ಹೆಗಡೆ : ಅಟಕಾಮಾ ಮರುಭೂಮಿಯಲ್ಲಿ ಅಪೂರ್ವ ಓಯಸಿಸ್

ಅಕ್ಟೊಬರ್ 12-13ರಂದು ನಮ್ಮ ಸುದ್ದಿ ಮಾಧ್ಯಮಗಳು ಇಲ್ಲಿನ ರಾಜಕೀಯ ಗಬ್ಬು ಗದ್ದಲಗಳ ಕ್ಷಣಕ್ಷಣದ ವರದಿಗಾಗಿ ಪರದಾಡುತ್ತಿದ್ದಾಗ ಜಗತ್ತಿನ ಪ್ರಮುಖ ಸುದ್ದಿ ಕ್ಯಾಮರಾಗಳೆಲ್ಲ ಚಿಲಿ ದೇಶದ ಗಣಿ ಸುರಂಗವೊಂದಕ್ಕೆ ಮುಖ ಮಾಡಿ ನಿಂತಿದ್ದವು. ಅಲ್ಲಿ ಎರಡು ಸಾವಿರ ಅಡಿ ಆಳದ ಸುರಂಗದಲ್ಲಿ 69 ದಿನಗಳಿಂದ ಸಿಲುಕಿದ್ದ 33 ಕಾರ್ಮಿಕರು ಅಂದು ಗಂಟೆಗೊಬ್ಬೊಬ್ಬರಂತೆ ಮೇಲೆದ್ದು ಬರುವ ದೃಶ್ಯವನ್ನು ವಿಶ್ವಾದಾದ್ಯಂತ ಸಾವಿರಾರು ಟಿವಿ ಚಾನೆಲ್‌ಗಳು ನೇರ ಬಿತ್ತರಣೆ ಮಾಡುತ್ತಿದ್ದವು.

ಜೀವಂತ ಸಮಾಧಿ ಆಗಬಹುದಾಗಿದ್ದ ಅಷ್ಟೊಂದು ಜನರನ್ನು ಅಷ್ಟೊಂದು ದೀರ್ಘ ಯತ್ನದಿಂದ ಹೊರಕ್ಕೆ ಕರೆತಂದಿದ್ದು ಮಾನವ ಇತಿಹಾಸದ ಮಹಾಘಟನೆ ಎನಿಸಿತು. ಗಣಿಯಲ್ಲಿ ಸಿಕ್ಕಿಬಿದ್ದವರನ್ನು ಪತ್ತೆ ಹಚ್ಚಲು ಬಳಸಿದ ತಾಂತ್ರಿಕ ಕೌಶಲ, ಸಂಪರ್ಕ ತಂತ್ರಜ್ಞಾನ, ಅವರನ್ನು ಜೀವಂತ ಉಳಿಸಲು ಬಳಸಿದ ಮನೋವೈಜ್ಞಾನಿಕ ವಿಧಾನ, ಅವರ ಆರೋಗ್ಯ ತಪಾಸಣೆ ಮಾಡಿ, ಆಹಾರ- ಔಷಧ ರವಾನಿಸಿದ ಟೆಲಿಮೆಡಿಕಲ್ ಸಾಹಸ, ಅವರನ್ನು ಕೊಳವೆಯ ಮೂಲಕ ಹೊರತರಲು ಬಳಸಿದ ಡ್ರಿಲ್ಲಿಂಗ್ ತಂತ್ರಜ್ಞಾನ, ಅವೆಲ್ಲವುಗಳ ಹಿಂದಿನ ಬಹುರಾಷ್ಟ್ರೀಯ ಸಂಘಟನಾ ಕೌಶಲ ಈ ಒಂದೊಂದೂ ಅವಿಸ್ಮರಣೀಯ ಗಾಥೆಯೇ ಆಯಿತು.

ದಕ್ಷಿಣ ಅಮೆರಿಕದ ಚಿಲಿ ದೇಶದ ಅಟಕಾಮಾ ಮರುಭೂಮಿ ಎಂದರೆ ಜಗತ್ತಿನ ಅತ್ಯಂತ ಶುಷ್ಕ ಪ್ರದೇಶವಷ್ಟೇ ಅಲ್ಲ, ತರಾವರಿ ಖನಿಜಗಳ ಖಜಾನೆಯೂ ಹೌದು. ಅಲ್ಲಿನ ಸ್ಯಾನ್ ಯೋಸೆ ಗಣಿಯಿಂದ ಚಿನ್ನ ಮತ್ತು ತಾಮ್ರದ ಅದಿರನ್ನು ಹೊರತೆಗೆಯುವ ಕೆಲಸ 12 ವರ್ಷಗಳಿಂದ ನಡೆಯುತ್ತಿದೆ. ಆಗಸ್ಟ್ 5ರಂದು ಇಳಿಜಾರಿನ ಸುರಂಗದ ಸುಮಾರು ಒಂದೂವರೆ ಸಾವಿರ ಅಡಿಯಷ್ಟು ಆಳದಲ್ಲಿ ಮೇಲ್ಛಾವಣಿ ಕುಸಿಯಿತು. ಅಲ್ಲಿಂದ ಇನ್ನೂ ಕೆಳಕ್ಕೆ 2200 ಅಡಿ ಆಳದಲ್ಲಿ ಅದಿರು ತೆಗೆಯುತ್ತಿದ್ದ 33 ಕಾರ್ಮಿಕರಿಗೆ ಹೊರ ಬರುವ ಏಕೈಕ ದಾರಿ ಅದಾಗಿತ್ತು. ಅದು ಮುಚ್ಚಿಕೊಂಡಿತು.

ಸುರಂಗ ಕುಸಿದರೆ ದೂಳು ಚದುರುವುದು ತೀರ ನಿಧಾನ. ಕುಸಿದ ಸಾಮಗ್ರಿಯನ್ನು ತೆರವು ಮಾಡಲೆಂದು ಜೆಸಿಬಿಯಂಥ ಯಂತ್ರಗಳು ಇಳಿದು ಹೋಗಲಾರವು. ಸಿಡಿಮದ್ದು ಹಾಕುವಂತಿಲ್ಲ. ಮತ್ತೆಲ್ಲೋ ಕುಸಿಯಬಹುದು. ಹಾರೆ ಹಾಕಲು ಹೋದರೆ ಕಾರ್ಮಿಕನ ಜೀವಕ್ಕೇ ಅಪಾಯ ಬರಬಹುದು. ಅಂತೂ ಎರಡು ದಿನಗಳ ನಂತರ ಹಾರೆ ಹಿಡಿದು, ಮುಖವಾಡ, ತಲೆದೀಪ ಧರಿಸಿ ಸುರಂಗದಲ್ಲಿ ಕೆಲವರು ಇಳಿಯುತ್ತಿದ್ದಂತೆ ಮತ್ತೊಂದು ಕುಸಿತ ಸಂಭವಿಸಿತು. ಈಗಂತೂ ಬೇರೆ ಉಪಾಯ ಉಳಿಯಲಿಲ್ಲ. ನೆಲದ ಮೇಲಿಂದ ಇನ್ನೊಂದು ಸುರಂಗವನ್ನೇ ಕೊರೆಯಬೇಕು. ಅದು ಇನ್ನೂ ಕಷ್ಟ. ಸಿಡಿಮದ್ದು ಬಳಸದೆ 2000 ಅಡಿ ಆಳದವರೆಗೆ ಗಟ್ಟಿ ಬಂಡೆಯನ್ನು ಕೊರೆಯುವುದಾದರೆ ವರ್ಷಗಟ್ಟಲೆ ಬೇಕಾಗುತ್ತದೆ. ಇಷ್ಟಕ್ಕೂ ಗಣಿ ಕಾರ್ಮಿಕರಿದ್ದ ತಾಣವನ್ನು ಈ ಹೊಸ ಸುರಂಗ ತಲುಪುತ್ತದೆಂಬ ಭರವಸೆಯೂ ಇಲ್ಲ. ಅವರ ಸಾವು ಬದುಕಿನ ಸುದ್ದಿಯೂ ಇಲ್ಲ.

ಸಂಬಂಧಿಕರು, ಸಂಬಂಧವಿಲ್ಲದವರು ಆಗಲೇ ಗಣಿದ್ವಾರದ ಸುತ್ತ ಜಮಾಯಿಸತೊಡಗಿದ್ದರು. ಅದೇ ತಾನೆ ಚುನಾವಣೆ ಗೆದ್ದು ಚಿಲಿಯ ರಾಷ್ಟ್ರಪತಿ ಪದವಿಗೇರಿದ್ದ ಶತಕೋಟ್ಯಧೀಶ ಸೆಬಾಸ್ಟಿಯನ್ ಪಿನ್ಯೇರಾ ತುರ್ತಾಗಿ ಅಮೆರಿಕ, ಪೆರು, ಕೆನಡಾ, ಆಸ್ಟ್ರೇಲಿಯಾಗಳ ತಾಂತ್ರಿಕ ನೆರವನ್ನು ಕೋರಿದರು. ಹೊಸ ಸುರಂಗ ಕೊರೆತವಂತೂ ಸಾಧ್ಯವಿಲ್ಲ. ಆದರೆ ತ್ವರಿತ ರಂಧ್ರ ಕೊರೆಯಬಲ್ಲ ಡ್ರಿಲ್ಲಿಂಗ್ ಯಂತ್ರಗಳು ನಾನಾ ದೇಶಗಳಿಂದ ಬಂದವು. ಒಂದಂತೂ 40 ಟ್ರಕ್‌ಗಳ ಮೇಲೆ ಉದ್ದ ಮಲಗಿ ಸವಾರಿ ಮಾಡಿ ಬಂತು. ಹದಿಮೂರು ದೇಶಗಳ ಡ್ರಿಲ್ಲಿಂಗ್ ತಜ್ಞರ ನೆರವಿನಿಂದ ಏಕಕಾಲಕ್ಕೆ ಮೂರು ಕಡೆಗಳಲ್ಲಿ ಐದಿಂಚು ಅಗಲದ ರಂಧ್ರ ಕೊರೆಯುವ ಕೆಲಸ ಆರಂಭವಾಯಿತು. ಅವು ಗುರಿ ತಲುಪುತ್ತವೆಂಬ ನಂಬಿಕೆಯೂ ಇರಲಿಲ್ಲ. ಏಕೆಂದರೆ ಗಣಿಯ ನಕ್ಷೆ ಸರಿ ಇರಲಿಲ್ಲ. ಕತ್ತಲಲ್ಲಿ ಕಣ್ಣು ಕಟ್ಟಿಕೊಂಡು ಒಂದು ಮೈಲು ತಳಕ್ಕಿರುವ ಹಾವಿನತ್ತ ಬಾಣ ಬಿಟ್ಟಂತೆ. ಪಕ್ಕಾ ಗೆರೆ ಹೊಡೆದಂತೆ ಗುರಿ ಇಟ್ಟು ರಂಧ್ರ ಕೊರೆಯಲೆಂದು ನಿಷ್ಣಾತ ಟೊಪೊಗ್ರಾಫರ್ ಯುವತಿ ಮಸರಾಡೊ ವಾಲ್ಡೆಸ್ ನಿಯುಕ್ತಿಗೊಂಡಳು.

ಕಂಪ್ಯೂಟರ್ ಲೆಕ್ಕಾಚಾರ, ಲೇಸರ್ ಕಿರಣ ಶಲಾಕೆಯ ನೆರವಿನಿಂದ ಆಕೆ ಇಟ್ಟ ಗುರಿ ಹುಸಿಯಾಗಲಿಲ್ಲ. ಡ್ರಿಲ್ಲಿಂಗ್ ಆರಂಭಿಸಿ ಅಂತೂ ಹದಿನೈದು ದಿನಗಳ ನಂತರ ಮೂರರಲ್ಲಿ ಒಂದು ರಂಧ್ರ ಜನರಿದ್ದ ಸುರಂಗವನ್ನು ತಲುಪಿತು. ರಂಧ್ರದಲ್ಲಿ ತೂರಿಸಿದ ದಾರದ ಮೂಲಕ  ‘ನಾವು ಎಲ್ಲ 33 ಜನರೂ ಬದುಕಿದ್ದೇವೆ’ ಎಂಬ  ‘ತಂತಿ ಸಂದೇಶ’ ಕೆಳಗಿನಿಂದ ಬಂತು. ನಿರಾಸೆಯನ್ನೇ ನಿರೀಕ್ಷಿಸಿದವರಿಗೆ ಸಂಭ್ರಮದ ಕೋಲ್ಮಿಂಚು.

ಅತ್ತ ಆಳದಲ್ಲಿ ಸಿಲುಕಿದವರು ಅತ್ಯಂತ ತಾಳ್ಮೆ ಮತ್ತು ಶಿಸ್ತಿನಿಂದ ಜೀವ ಹಿಡಿದುಕೊಂಡಿದ್ದರು. ಆ ಎಲ್ಲರ ಫೋರ್ಮನ್  (ಮೇಲ್ವಿಚಾರಕ) ಲೂಯಿಸ್ ಊರ್ಜ್ವಾನ ನಿರ್ದೇಶನದಂತೆ ಉದ್ದನ್ನ ಸುರಂಗದ ಅಂಚಿನಲ್ಲಿರುವ 30 ಬೈ 40 ಅಡಿ ಚೌಕಿಯಲ್ಲಿ ಎಲ್ಲರೂ ಸೇರಿದ್ದರು. ಎರಡು ದಿನಗಳಿಗೆ ಸಾಲುವಷ್ಟೇ ಆಹಾರ ಇತ್ತಾದರೂ ಇವರು ನೀರು, ಊಟ ಮತ್ತು ಬೆಳಕನ್ನು ಮಿತವಾಗಿ ಬಳಸುತ್ತ ಹೊರಜಗತ್ತಿನ ಒಂದು ಪುಟ್ಟ ಸಂದೇಶಕ್ಕಾಗಿ ಹದಿನಾರು ದಿನಗಳ ಕಾಲ ಕಾದು ಕೂತಿದ್ದರು. ಎಂಥ ಶಿಸ್ತು ಕೂಡ ಮೂರು ನಾಲ್ಕನೆಯ ದಿನಗಳಲ್ಲೇ ಭಗ್ನವಾಗಿ ಅಲ್ಲಿ ನಿರಾಸೆ, ಮಂಕು, ಬಡಿದಾಟ, ಕೊಲೆ, ಮತಿಭ್ರಮಣೆ, ನರಭಕ್ಷಣೆ ಏನೂ ಆಗುವ ಸಂಭವ ಇರುತ್ತದೆ. ಆದರೆ ಇವರು ಅದೆಷ್ಟು ಸಂಯಮ ಪಾಲಿಸಿದ್ದರೆಂದರೆ, ಹದಿನೇಳನೆಯ ದಿನ ತಂತಿಯ ಮೂಲಕ ಮೊದಲ ಧ್ವನಿಗ್ರಹಣ ವ್ಯವಸ್ಥೆ ಬಂದಾಕ್ಷಣ ಎಲ್ಲರೂ ಒಟ್ಟಾಗಿ ಚಿಲಿಯ ರಾಷ್ಟ್ರಗೀತೆ ಹಾಡಿದರು.

ಅಷ್ಟೆ, ಇಡೀ ರಾಷ್ಟ್ರ ಅವರ ಕ್ಷೇಮಕ್ಕಾಗಿ ಕಟಿಬದ್ಧವಾಯಿತು. ಆ ಐದಿಂಚು ಅಗಲದ ರಂಧ್ರದ ಮೂಲಕ ಅವರೆಲ್ಲರನ್ನೂ ಬದುಕಿಸಿಕೊಳ್ಳಬೇಕು. ನೀರು, ಆಹಾರ, ಔಷಧ, ಪತ್ರಗಳ ಬಟವಾಡೆ ನಡೆಯಿತು. ನಂತರ ಹೊಸ ಹೊಸ ಉಪಾಯಗಳ ಮೂಲಕ ಕ್ಯಾಮರಾ, ಟಿವಿ, ಬ್ಯಾಟರಿ, ಬಟ್ಟೆಬರೆ, ಫ್ಯಾನು, ವೈದ್ಯಕೀಯ ಸಲಕರಣೆ, ಅಷ್ಟೇಕೆ  ಅಸ್ತಮಾ ರೋಗಿಯೊಬ್ಬನಿಗೆ ಬೆಚ್ಚನ್ನ ಮಂಚವನ್ನೂ ರವಾನಿಸಲಾಯಿತು. ವಿಡಿಯೊ ಕ್ಯಾಮರಾ ಕಳಿಸಿ ಅಲ್ಲಿದ್ದವರ ಸ್ಥಿತಿಗತಿ ರೆಕಾರ್ಡ್ ಮಾಡಿ ತರಿಸಲಾಯಿತು. ವಿಜ್ಞಾನದ ನೆರವೊಂದೇ ಸಾಲದೆಂದು ಕೆಳಗಿದ್ದ ಎಲ್ಲರಿಗೂ ಒಂದೊಂದು ಬೈಬಲ್ಲನ್ನೂ ತಲುಪಿಸಿದ್ದಾಯಿತು!

ಆದರೆ ಆ ಚಿಕ್ಕ ರಂಧ್ರದ ಮೂಲಕ ಅವರನ್ನು ಮೇಲೆತ್ತುವುದಂತೂ ಸಾಧ್ಯವಿಲ್ಲ. ಅತಿ ಕ್ಷಿಪ್ರ ಅವಧಿಯಲ್ಲಿ ಅತಿ ದೊಡ್ಡ ರಂಧ್ರವನ್ನು ಮಾಡಿ ಅತಿ ಚಿಕ್ಕ ತೊಟ್ಟಿಲಲ್ಲಿ ಒಬ್ಬೊಬ್ಬರನ್ನು ಮೇಲಕ್ಕೆ ತರಬೇಕು. ಇಡೀ ಜಗತ್ತಿಗೆ ಸಂದೇಶ ಹೋಯಿತು.

ನೌಕಾಪಡೆಯ ತಜ್ಞರು ಬಂದರು. ಸಮುದ್ರ ತಳದಲ್ಲಿರುವ ಜಲಾಂತರ್ಗಾಮಿ ನೌಕೆಗಳಿಗೆ ತುರ್ತು ನೆರವನ್ನು ಸಾಗಿಸುವಂಥ ಕೊಳವೆಯ ವಿನ್ಯಾಸವನ್ನು ತಂದರು. ಅಮೆರಿಕದ ನಾಸಾ ಎಂಜಿನಿಯರ್‌ಗಳು ಬಂದರು. ಎರಡು ಅಡಿ ಅಗಲದ 14 ಅಡಿ ಉದ್ದದ ಕ್ಷಿಪಣಿ ಮಾದರಿಯ ಕೊಳವೆಯ (ಲಿಫ್ಟ್) ನೀಲನಕ್ಷೆ ಸಿದ್ಧವಾಯಿತು. ಎರಡೂವರೆ ಅಡಿ ಅಗಲದ ಬಾವಿಯನ್ನು ಕೊರೆಯಬೇಕು. ಮೂರು ಡ್ರಿಲ್ಲಿಂಗ್ ಯಂತ್ರಗಳು ಏಕಕಾಲಕ್ಕೆ ಒಂದೇ ಜಾಗದಲ್ಲಿ, ಲಂಬಕ್ಕೆ 11 ಡಿಗ್ರಿ ಓರೆಯಾಗಿ ರಂಧ್ರ ಮಾಡಬೇಕು. ವಜ್ರದ ಮೂತಿಯುಳ್ಳ ವಿಶೇಷ ಯಂತ್ರವೊಂದು ಪೆನ್ಸಿಲ್ವೇನಿಯಾದಿಂದ ಬಂತು. ನಿಗದಿತ ದಿಶೆಗಿಂತ ಒಂದೇಒಂದು ಡಿಗ್ರಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಲು ಡ್ರಿಲ್ಲಿಂಗ್ ಮೂತಿಗಳಿಗೆ ಲೇಸರ್ ಗೈಡರ್ ಬಂತು. ಕೊರೆದು ತೆಗೆದ ಚೂರ್ಣಗಳನ್ನು ಪುಡಿಮಾಡಿ ಮೇಲೆತ್ತಲು ಹೀರು ಕೊಳವೆ ಬಂತು. ರಂಧ್ರದ ಮೂಲಕ ಲಿಫ್ಟ್ ಸಲೀಸಾಗಿ ಚಲಿಸುವಂತೆ ರಂಧ್ರದ ಭಿತ್ತಿಗೆ ಕೇಸಿಂಗ್ ಹಾಕಬೇಕು. ಲಿಫ್ಟ್‌ಗೆ ಗಾಲಿಗಳನ್ನೂ ಜೋಡಿಸಬೇಕು. ಜಪಾನ್ ನೆರವಿಗೆ ಬಂತು.

ಇತ್ತ ಗಣಿಯ ಸುತ್ತ ಮೂರು ಸಾವಿರ ಜನರ ಟೆಂಟ್ ಪಟ್ಟಣವೇ ತಲೆಯೆತ್ತಿತು. ಸಂಬಂಧಿಕರನ್ನು ದೂರ ಓಡಿಸುವ ಬದಲು ಸರ್ಕಾರ ಆ ಮರುಭೂಮಿಯಲ್ಲಿ ನೀರು, ಸರಂಜಾಮು, ಶೌಚ, ಆಸ್ಪತ್ರೆ, ಪ್ರಾರ್ಥನಾ ಮಂದಿರ, ಸಂಪರ್ಕ ಸಾಧನ ಎಲ್ಲ ಒದಗಿಸಿತು. ತೀರ ಉದ್ವಿಗ್ನರಾದವರಿಗೆ ಸಾಂತ್ವನ ಹೇಳಲು ಖ್ಯಾತ ಮನೋವಿಜ್ಞಾನಿಗಳನ್ನು ಕರೆಸಿತು. ಸಂಬಂಧಿಕರು ಕೆಳಗಿದ್ದವರಿಗೆ ರವಾನಿಸುವ ಪತ್ರ- ಚಿತ್ರಗಳಲ್ಲಿ ನಿರಾಶೆಯ, ಖಿನ್ನತೆಯ ಲವಲೇಶವೂ ಇರಕೂಡದೆಂಬ ಸೆನ್ಸಾರ್ ಜಾರಿಗೆ ಬಂತು (ಉದಾ: ‘ನೀನು ಸುರಕ್ಷಿತ ಬದುಕಿ ಬರುತ್ತೀಯೆಂದು ಹಾರೈಸುತ್ತೇನೆ’ ಎಂಬ ವಾಕ್ಯದ ಬದಲು,  ‘ನೀನು ಮೇಲಕ್ಕೆ ಬಂದಾಗ ತಬ್ಬಿಕೊಳ್ಳಲು ನಾನಿದ್ದೇನೆ’ ಎಂದು ಬರೆಯಬೇಕು….). ರಂಧ್ರ ತೋಡುವ ಕೆಲಸದಲ್ಲಿ ತಾಂತ್ರಿಕ ಅಡಚಣೆ ಬಂದಾಗ, ಇಲ್ಲವೆ  ‘ಕ್ರಿಸ್‌ಮಸ್ ವೇಳೆಗೆ ಎಲ್ಲರೂ ಹೊರಕ್ಕೆ’ ಎಂದು ರಾಷ್ಟ್ರಪತಿ ಹೇಳಿದಾಗ ಬಂಧುಗಳ ಆಕ್ರೋಶ, ಪ್ರತಿಭಟನೆಯನ್ನು ಶಾಂತವಾಗಿ ನಿಭಾಯಿಸಲು ಸ್ವಯಂಸೇವಕರು ಕಟಿಬದ್ಧರಾದರು. 

ಕೆಳಗೆ ಸಿಕ್ಕಿಹಾಕಿಕೊಂಡವರ ಮೇಲೆ ನಿಗಾ ಇಡಲೆಂದು ನಾಸಾ ತಜ್ಞರ ಇನ್ನೊಂದು ತಂಡ ಬಂತು. ಬಾಹ್ಯಾಕಾಶ ನೌಕೆಯ ಇಕ್ಕಟ್ಟಿನಲ್ಲಿ,  ಇಲ್ಲವೆ ಯುದ್ಧರಂಗದ ಬಂಕರ್‌ಗಳಲ್ಲಿ ಸಿಕ್ಕಿಬಿದ್ದವರಿಗೆ ಮನ ಸಮತೋಲಕ್ಕೆಂದು ರೂಪಿತವಾಗಿದ್ದ ವಿವಿಧ ಪಾಠಗಳು ಕೆಳಕ್ಕೆ ರವಾನೆಯಾದವು. ಸತತ ಕೃತಕ ಮಂದ ಬೆಳಕಿನಿಂದಾಗಿ ನಿದ್ರೆ ಮತ್ತು ಎಚ್ಚರದ ಅವಧಿಗಳೆಲ್ಲ ಏರುಪೇರಾಗಿದ್ದರಿಂದ ಅವರ ಜೈವಿಕ ಗಡಿಯಾರವನ್ನು ಸರಿಪಡಿಸಲೆಂದು ನಿಗದಿತ ವೇಳೆಗೆ ಅವರನ್ನು ಮಲಗಿಸುವ, ಎಬ್ಬಿಸುವ ಉಪಕ್ರಮಗಳು ಜಾರಿಗೆ ಬಂದವು. ಮೇಲಕ್ಕೆ ಬಂದಾಕ್ಷಣ ಹುಚ್ಚೆದ್ದು ಕುಣಿಯದಂತೆ ಅಥವಾ ಹೊಸ ಬೆಳಕಿಗೆ ಬೆಚ್ಚಿ ಕುಸಿಯದಂತೆ ಉನ್ಮಾದ ನಿಯಂತ್ರಣ ತಂತ್ರಗಳನ್ನು ಅವರಿಗೆ ಕಲಿಸಲಾಯಿತು. ರಂಧ್ರ ಸಿದ್ಧವಾಗಿ ಕ್ಷಿಪಣಿಯಂಥ ಲಿಫ್ಟ್ ಕೆಳಕ್ಕೆ ಪ್ರತ್ಯಕ್ಷವಾದಾಗ ನೂಕು ನುಗ್ಗಲು ಆಗದಂತೆ, ಯಾರು ಯಾವ ಕ್ರಮದಲ್ಲಿ ಹೊರಡಬೇಕೆಂದು ತಾಲೀಮು ನೀಡಲಾಯಿತು (ಅದೇ ವೇಳೆಗೆ ನಮ್ಮಲ್ಲಿ ರೆಸಾರ್ಟ್‌ಗಳಲ್ಲಿ ಬಂದಿಯಾಗಿದ್ದ ಶಾಸಕರಿಗೂ ತಾಲೀಮು ಸಿಗತೊಡಗಿತ್ತು. ಶಿಸ್ತಾಗಿ ಬಸ್ ಏರಿ, ಕಾಯಿಲೆಯವರನ್ನೂ ಮೆಲ್ಲಗೆ ಮೇಲಕ್ಕೆ ಹತ್ತಿಸಿ, ವಿಧಾನ ಸೌಧವನ್ನು ಪ್ರವೇಶಿಸಿ ಅಲ್ಲಿ ಕುಸಿತದ ಭೀತಿಯಲ್ಲಿದ್ದ ಸರ್ಕಾರವನ್ನು ಮೇಲೆತ್ತುವ ಇಲ್ಲವೆ ಬೀಳಿಸುವ ತಾಲೀಮು).

ಡ್ರಿಲ್ಲಿಂಗ್ ಕೊಟ್ಟಕೊನೆಯ ಹಂತಕ್ಕೆ ಬಂದಿತ್ತು. ರಂಧ್ರದ ಭಿತ್ತಿಗಳು ಕುಸಿಯದಂತೆ ಕೇಸಿಂಗ್ ಕೊಳವೆ ಹಾಕಿ ರಂಧ್ರದ ಬಲವರ್ಧನೆ ಮಾಡಲಾಯಿತು. ಕ್ಷಿಪಣಿ ಮಾದರಿಯ ಲಿಫ್ಟ್‌ಗೆ ಉಕ್ಕಿನ ಹಗ್ಗ, ಸಿಗ್ನಲ್ ಕೇಬಲ್ ಹಾಗೂ ಗಡಗಡೆ ಜೋಡಣೆಯಾದವು. ನೌಕಾಪಡೆಯ ಮುಳುಗುವೀರನೊಬ್ಬ ಹೊಸ ಲಿಫ್ಟ್‌ನಲ್ಲಿ ನಿಂತು ಎರಡು ಬಾರಿ ಕೆಳಕ್ಕೆ- ಮೇಲಕ್ಕೆ ಚಲಿಸಿದ. ಕಾರ್ಮಿಕರು ಮೇಲಕ್ಕೆ ಬರುವ ದೃಶ್ಯದ ವರದಿಗೆಂದು ನಾನಾ ದೇಶಗಳಿಂದ 1300ಕ್ಕೂ ಹೆಚ್ಚು ವರದಿಗಾರರು ಬಂದರು. ಚಿಲಿ ಮತ್ತು ಬೊಲಿವಿಯಾ ದೇಶಗಳ ಅಧ್ಯಕ್ಷರ ಸಮ್ಮುಖದಲ್ಲಿ ಮೊದಲ ಕಾರ್ಮಿಕ ಮೇಲಕ್ಕೆ ಬಂದಿದ್ದೇ ತಡ, ಪಾತಾಳದಿಂದ ಹರ್ಷ ಆಕಾಶಕ್ಕೆ ಚಿಮ್ಮಿತು.

ಮುಂದಿನ 24 ಗಂಟೆಗಳಲ್ಲಿ ಭೂಮಿ ತನ್ನ ಅಕ್ಷದ ಸುತ್ತ ಡಿಗ್ರಿಡಿಗ್ರಿಯಾಗಿ ಸುತ್ತುತ್ತಿದ್ದ ಹಾಗೆ ಚಿಲಿಗಣಿಯ ಉದರದಿಂದ ಒಬ್ಬೊಬ್ಬನಾಗಿ ಏರುತ್ತ, ಕೊನೆಯವನಾಗಿ ಊರ್ಜ್ವಾ ಮೇಲಕ್ಕೆ ಬರುವವರೆಗೆ ನಾನಾ ದೇಶಗಳಿಂದ ಅಭಿನಂದನೆಗಳು, ಪ್ರಶಂಸೆಗಳು, ಪ್ರಶಸ್ತಿಗಳು, ಬಹುಮಾನಗಳು ಸಾಲುಗಟ್ಟಿ ಬಂದವು. ಡ್ರಿಲ್ಲಿಂಗ್‌ನಿಂದಾದ ದುರಂತವನ್ನು ಡ್ರಿಲ್ಲಿಂಗ್‌ನಿಂದಲೇ ಸುಖಾಂತಗೊಳಿಸಿದ ತಂತ್ರಯುಗದ ಚರಿತ್ರೆಗೆ ಹೊಸ ಸಾಲುಗಳನ್ನು ಸೇರಿಸಿದವು.

Copyright : http://www.prajavani.net/Content/Oct212010/nagesh20101020209454.asp

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.