ಇದರಲ್ಲೇನೋ ವ್ಯಂಗ್ಯದ ವಾಸನೆ ಹೊಡೆಯಿತೆ? ಹೌದು, ನಮ್ಮ ದೇಶದ ಜನರ ಬದುಕಿನಲ್ಲಿ ಸಾವಿರ ಸಾವಿರ ಸಮಸ್ಯೆಗಳಿರುವಾಗ ರಾಷ್ಟ್ರೀಯ ಸಂಸ್ಥೆಯೊಂದು ಇಂತಹ ಸೌಂದರ್ಯ ಪ್ರಸಾಧನಕ್ಕೆ ಆದ್ಯತೆ ಕೊಡುವುದು ಈ ಕಾಲದ ವ್ಯಂಗ್ಯವೇ ಹೌದು.

ನೀವು ಬೆಳ್ಳಗಿಲ್ಲವೆ? ನಿಮ್ಮ ಮುಖವೂ ಪ್ರಿಯಾಂಕಾ ಚೋಪ್ರಾ ಥರಾ ಬೆಳ್ಳಗೆ, ನಿಷ್ಕಳಂಕವಾಗಿರಬೇಕೆ? ಕೊಂಚ ತಡೆಯಿರಿ, ಹೊಸದೊಂದು ಮಾಯಾ ಮುಲಾಮು ನಿಮಗಾಗಿ ಸಿದ್ಧವಾಗುವ ಸಂಭವವಿದೆ.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಅಂಥ ಮುಲಾಮನ್ನು ತಯಾರಿಸಬಲ್ಲವರಿಗೆ ಒಂದು ಸ್ಪರ್ಧೆಯನ್ನು ಏರ್ಪಡಿಸಿದೆ. ಅಮೆರಿಕನ್ ಮೂಲದ ‘ಪ್ರಾಕ್ಟರ್ ಅಂಡ್ ಗಾಂಬಲ್’ ಹೆಸರಿನ ಬಹುರಾಷ್ಟ್ರೀಯ ಕಂಪೆನಿಯ ಜತೆ ಸೇರಿ, ಅದು ಏರ್ಪಡಿಸಿರುವ ಸ್ಪರ್ಧೆಯಲ್ಲಿ ಯಾವುದೇ ವಿಜ್ಞಾನಿ ಭಾಗವಹಿಸಬಹುದು. ವಿಜ್ಞಾನಿಯೇ ಆಗಬೇಕೆಂದೇನಿಲ್ಲ. ಯಾರಾದರೂ ಪಾಲ್ಗೊಂಡು ಸಾವಿರ ಡಾಲರ್ ಬಹುಮಾನವನ್ನು ಗೆಲ್ಲಬಹುದು. ನಂತರ ಆ ಅಮೆರಿಕನ್ ಕಂಪೆನಿ ದೊಡ್ಡ ಪ್ರಮಾಣದಲ್ಲಿ ಕ್ರೀಮನ್ನು ಉತ್ಪಾದಿಸಿ ಎಲ್ಲೆಡೆ ಮಾರುಕಟ್ಟೆಗೆ ತರಬಹುದು. ಹಳ್ಳಿಮೂಲೆಯ ಗೂಡಂಗಡಿಯಲ್ಲೂ ಅದು ಸ್ಯಾಶೆಯಲ್ಲಿ ಸಿಗಬಹುದು.
ಇದರಲ್ಲೇನೋ ವ್ಯಂಗ್ಯದ ವಾಸನೆ ಹೊಡೆಯಿತೆ? ಹೌದು, ನಮ್ಮ ದೇಶದ ಜನರ ಬದುಕಿನಲ್ಲಿ ಸಾವಿರ ಸಾವಿರ ಸಮಸ್ಯೆಗಳಿರುವಾಗ ರಾಷ್ಟ್ರೀಯ ಸಂಸ್ಥೆಯೊಂದು ಇಂತಹ ಸೌಂದರ್ಯ ಪ್ರಸಾಧನಕ್ಕೆ ಆದ್ಯತೆ ಕೊಡುವುದು ಈ ಕಾಲದ ವ್ಯಂಗ್ಯವೇ ಹೌದು. ಹಾಗೆಂದು ಇದು ಕಲ್ಪಿತ ಕಥೆಯಂತೂ ಅಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಪ್ರತಿ ತಿಂಗಳೂ ಒಂದೊಂದು ಸಂಶೋಧನ ಸ್ಪರ್ಧೆಯನ್ನು ಏರ್ಪಡಿಸುತ್ತದೆ.
‘ಜಗತ್ತಿನ ತೀರ ಸಂಕೀರ್ಣ ಮತ್ತು ವಾಸ್ತವದ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಸವಾಲು ನಿಮ್ಮೆದುರು ಇದೆ; ಜನರ ಬದುಕನ್ನು ಸುಧಾರಿಸಬಲ್ಲ ಐಡಿಯಾ ನಿಮ್ಮಲ್ಲಿದ್ದರೆ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ’ ಎಂಬ ಘೋಷಣೆ ಅದಕ್ಕಿದೆ. ಈ ತಿಂಗಳ ಸ್ಪರ್ಧೆ ಏನೆಂದರೆ, ತ್ವಚೆಯನ್ನು ಬೆಳ್ಳಗೆ ಮಾಡುವ ಔಷಧವನ್ನು ಬೆಳಕಿಗೆ ತರುವುದು.
ಏಕೆಂದರೆ ಈಗ ಬಳಕೆಯಲ್ಲಿರುವ ‘ಹೈಡ್ರೊಕ್ವಿನೋನ್’ ಎಂಬ ರಸಾಯನವನ್ನು ಮುಖಕ್ಕೆ ಲೇಪಿಸಿಕೊಂಡರೆ ಅದು ತುಸುಮಟ್ಟಿಗೆ ಉರಿಯುತ್ತದೆ. ಕೆಲವರಲ್ಲಿ ಅದು ಅಲ್ಲಲ್ಲಿ ಬಿಳಿಕಲೆ ಉಂಟುಮಾಡುತ್ತದೆ. ಇಂಥ ಅಡ್ಡ ಪರಿಣಾಮಗಳಿಂದಾಗಿ ಅನೇಕ ದೇಶಗಳಲ್ಲಿ ಇದಕ್ಕೆ ನಿಷೇಧ ಹಾಕಲಾಗಿದೆ. ಇದಕ್ಕಿಂತ ಉತ್ತಮ ರಸದ್ರವ್ಯ. ಗೊತ್ತಿದ್ದರೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ.
ಈ ಸ್ಪರ್ಧೆ ಹಾಸ್ಯಾಸ್ಪದವಷ್ಟೇ ಅಲ್ಲ, ತುಸು ಆಳಕ್ಕಿಳಿದರೆ ಇದರ ಹಿಂದಿನ ಉದ್ದೇಶ ನಮಗೆ ಅರ್ಥವಾಗುತ್ತದೆ. ಇಂದು ಕಪ್ಪು ಬಣ್ಣದ ತ್ವಚೆಯನ್ನು ಬಿಳಿಯದನ್ನಾಗಿ ಮಾಡುವ ಮುಲಾಮುಗಳದ್ದು ಶತಕೋಟಿ ಡಾಲರ್‌ಗಳ ವಹಿವಾಟು.
ಏಕೆಂದರೆ ಟಿವಿ ಧಾರಾವಾಹಿಗಳಲ್ಲಿ ಎಲ್ಲೆಲ್ಲೂ ಬಿಳಿಮುಖಗಳೇ ಕಾಣುತ್ತವೆ. ವಂಚಕರು, ದುಷ್ಟರು ಮತ್ತು ಮಂಥರೆಯಂಥ ಕುಟಿಲರು ಮಾತ್ರ ಕಂದುಬಣ್ಣದವರಾಗಿರುತ್ತಾರೆ. ಲವ್ ಮಾಡುವವರಿಗಂತೂ ಬಿಳಿ ಹುಡುಗಿಯೇ ಬೇಕು.ಹಾಗಾಗಿ ಕಪ್ಪು ಮುಖವನ್ನು ಬಿಳಿ ಮಾಡುವ ಸಾಧನಕ್ಕೆ ಬೇಡಿಕೆ ಎಂದೆಂದೂ ಎಲ್ಲೆಲ್ಲೂ ಇದ್ದೇ ಇರುತ್ತದೆ.
ಸಾವಿರಾರು ವರ್ಷಗಳ ನಮ್ಮ ಆಯುರ್ವೇದ ಪರಂಪರೆಯಲ್ಲಿ ತ್ವಚೆಯನ್ನು ಶುಭ್ರಗೊಳಿಸುವ ರಹಸ್ಯಗಳು ಇದ್ದಿರಲೂ ಸಾಕು. ಯಾವುದೋ ಹಳ್ಳಿಯ ದೇಸೀವೈದ್ಯರ ಕುಟುಂಬಕ್ಕೆ ಅದು ಗೊತ್ತಿರಬಹುದು. ಅಥವಾ ತಾಳೆಗರಿಗಳಲ್ಲಿ ಶ್ಲೋಕರೂಪದಲ್ಲಿ ಅದು ಅವಿತಿರಬಹುದು. ಅಂಥ ಜ್ಞಾನಸೂತ್ರವನ್ನು, ಮೂಲಿಕೆಗಳನ್ನು, ರಸದ್ರವ್ಯಗಳನ್ನು ಎತ್ತಲೆಂದು, ಎತ್ತಿ ಪೇಟೆಂಟ್ ಪಡೆಯಲೆಂದು ನಾನಾ ಬಗೆಯ ಯತ್ನಗಳು ನಡೆಯುತ್ತಲೇ ಇವೆ.
ಈಗಿನ ಸ್ಪರ್ಧೆಯ ವಿಶೇಷವನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಬಹುಕೋಟಿ ವಹಿವಾಟಿನ ಬಹುರಾಷ್ಟ್ರೀಯ ಕಂಪೆನಿಯೊಂದು ಭಾರತದ ಸರ್ಕಾರಿ ಸಂಸ್ಥೆಯನ್ನೇ ತನ್ನ ಸಹಭಾಗಿಯನ್ನಾಗಿ ಮಾಡಿ, ಜುಜುಬಿ ಸಾವಿರ ಡಾಲರ್‌ಗಳ ಆಮಿಷವೊಡ್ಡಿ ನಮ್ಮ ಪಾರಂಪರಿಕ ಜ್ಞಾನದ ಗಣಿಗಾರಿಕೆಗೆ ಹೊರಟಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕೇವಲ ಒಂದು ತಿಂಗಳು ಅವಧಿಯಿದೆ. ಹೊಸದೇನನ್ನೂ ತಯಾರಿಸಿ ಪರೀಕ್ಷಿಸುವಷ್ಟು ವ್ಯವಧಾನ ಇಲ್ಲ. ಹಿರಿಯರ ಕಾಲದಿಂದ ಬಂದ ಜ್ಞಾನವೇನಾದರೂ ಇದ್ದರೆ, ಅದನ್ನು ಮಾತ್ರ ಒಪ್ಪಿಸಬಹುದು.
ನಶಿಸಿ ಹೋಗುತ್ತಿರುವ ಜ್ಞಾನವನ್ನು ಆಧುನಿಕ ವಿಜ್ಞಾನದ ನಿಕಷಕ್ಕೆ ಒಡ್ಡಿ ಅದನ್ನು ಸಾರ್ವತ್ರಿಕ ಬಳಕೆಗೆ ತಂದರೆ ತಪ್ಪೇನೂ ಇಲ್ಲ. ಅದು ಮಾಡಬೇಕಾದ ಕೆಲಸವೇ ಹೌದು. ಆದರೆ ಆ ಕೆಲಸಕ್ಕೆ ವಿದೇಶೀ ಮೂಲದ ಲಾಭಾತುರ ಕಂಪೆನಿಯ ಸಹಭಾಗಿತ್ವ ಅಗತ್ಯವಿದೆಯೆ? ಕೇಂದ್ರ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆ ತಾನೊಬ್ಬನೇ ಮಾಡಬಹುದಿತ್ತಲ್ಲವೇ? ಸಾವಿರಾರು ಕೋಟಿ ರೂಪಾಯಿಗಳನ್ನು ಸಂಶೋಧನೆಗೆಂದು ವ್ಯಯಿಸುವ ಈ ಇಲಾಖೆ ಬರೀ ಅರ್ಧ ಲಕ್ಷ ರೂಪಾಯಿಗಳ ಖಾಸಗಿ ನೆರವು ಪಡೆದು ದೇಶದ ಪರಂಪರಾಗತ ಜ್ಞಾನವನ್ನು ಪರಭಾರೆ ಮಾಡುವುದೆ? ನಿನ್ನೆ ಹಠಾತ್ ನಿಧನರಾದ ಸ್ವದೇಶೀ ಆಂದೋಲನದ ಹರಿಕಾರ ರಾಜೀವ್ ದೀಕ್ಷಿತ್ ಇಂಥ ನೂರಾರು ಉದಾಹರಣೆಗಳನ್ನು ಕೊಡುತ್ತ ನಮ್ಮನ್ನು ಚಿಂತನೆಗೆ ಹಚ್ಚುತ್ತಿದ್ದರು. ಅವರು ತೆರವು ಮಾಡಿದ ಸ್ಥಾನವನ್ನು ತುಂಬಲು ಬಯಸುವವರು ಈ ಸ್ಪರ್ಧೆಯ ಉತ್ತರೋತ್ತರ ವಿದ್ಯಮಾನಗಳ ಮೇಲೆ ಕಣ್ಣಿಡಬಹುದು.
ಆಕರ್ಷಕ ಬಹುಮಾನ ಘೋಷಿಸಿ, ಹೊಸ ಸಂಶೋಧನೆಗಳಿಗೆ ಪ್ರೇರಣೆ ನೀಡುವ ವಿಧಾನ ಈಚೆಗೆ ತುಂಬಾ ಉತ್ತಮ ಫಲ ನೀಡುತ್ತಿದೆ. ಬಿಲ್ ಗೇಟ್ಸ್, ವಾರೆನ್ ಬಫೆಟ್‌ನಿಂದ ಹಿಡಿದು ಗೂಗಲ್‌ವರೆಗೆ ಇಂದು ನಾನಾ ವ್ಯಕ್ತಿಗಳು, ಖಾಸಗಿ ಸಂಸ್ಥೆಗಳು ಭಾರೀ ಮೊತ್ತದ ಬಹುಮಾನ ಘೋಷಿಸಿ ವಿಜ್ಞಾನದ ಮುನ್ನಡೆಗೆ ಮತ್ತು ಸಾರ್ವತ್ರಿಕ ಕಲ್ಯಾಣಕ್ಕೆ ಹೊಸ ದಾರಿಯನ್ನು ತೋರುತ್ತಿವೆ. ನಮ್ಮ ದೇಶದಲ್ಲಿ ಶತಕೋಟ್ಯಧೀಶರ ಸಂಖ್ಯೆ ವರ್ಷವರ್ಷಕ್ಕೆ ಹೆಚ್ಚುತ್ತಿದೆಯಾದರೂ ಯಾರೂ ವಿಜ್ಞಾನ- ತಂತ್ರಜ್ಞಾನದ ಮುನ್ನಡೆಗೆ ಬಹುಮಾನವನ್ನು ಘೋಷಿಸಿಲ್ಲ.
ಭಾರತ ಸರ್ಕಾರವೇನೊ ಸಂಶೋಧಕರಿಗೆ ಕೆಲವು ಲಕ್ಷ ರೂಪಾಯಿಗಳನ್ನು ಬಹುಮಾನ ರೂಪದಲ್ಲಿ ಹಂಚುತ್ತಿದೆಯಾದರೂ ಅದನ್ನು ಪಡೆಯಲು ಸರ್ಕಾರಿ ವಿಜ್ಞಾನಿಯೇ ಆಗಿರಬೇಕು, ಡಾಕ್ಟರೇಟ್ ಮಾಡಿರಬೇಕು ಇತ್ಯಾದಿ ನಿಯಮಗಳಿವೆ. ಸ್ವತಂತ್ರ ಸಂಶೋಧಕರನ್ನು ದೂರವಿಡುವ ಹೇರಳ ತಡೆಗೋಡೆಗಳು ಅಲ್ಲಿವೆ. ಇದಕ್ಕೆ ಅಪವಾದವೆಂಬಂತೆ, ಅಹಮದಾಬಾದ್‌ನ ಐಐಎಮ್‌ನ ಪ್ರೊಫೆಸರ್ ಅನಿಲ್ ಗುಪ್ತಾ ‘ರಾಷ್ಟ್ರೀಯ ಹೊಸ ಸಾಧನಾ ನಿಧಿ’ಯನ್ನು (ನ್ಯಾಶನಲ್ ಇನ್ನೊವೇಶನ್ ಫೌಂಡೇಶನ್) ಇದೇ ಡಿಎಸ್‌ಟಿ ನೆರವಿನಿಂದ ಸ್ಥಾಪಿಸಿದ್ದಾರೆ; ಜನಸಾಮಾನ್ಯರ ಸಂಕಷ್ಟಗಳನ್ನು ಪರಿಹರಿಸಬಲ್ಲ ಶೋಧಗಳಿಗೆ ಬಹುಮಾನ ಘೋಷಿಸುತ್ತಾರೆ. ವಿದ್ಯಾರ್ಹತೆ ಇಲ್ಲದವರೂ ತಮ್ಮ ಸಂಶೋಧನೆಯನ್ನು ಅಲ್ಲಿ ಸ್ಪರ್ಧೆಗೆ ಒಡ್ಡಬಹುದು (ವಿವರಗಳಿಗೆ: www.nif.org.in).
ಗಾಂಧೀಜಿ 1929ರಲ್ಲಿ ಅಂಥದ್ದೊಂದು ಸವಾಲನ್ನು ಒಡ್ಡಿದ್ದರೆಂದು ಅನಿಲ್ ಗುಪ್ತಾ ನೆನಪಿಸಿಕೊಳ್ಳುತ್ತಾರೆ. ನೂಲು ತೆಗೆಯುವ ಚರಖಾವನ್ನು ಸುಧಾರಿಸುವವರಿಗೆ ಒಂದು ಲಕ್ಷ (ಇಂದಿನ ಮೌಲ್ಯದ ಪ್ರಕಾರ 20 ಕೋಟಿ) ರೂಪಾಯಿ ಬಹುಮಾನವನ್ನು ಘೋಷಿಸಿದ್ದರು. ಮ್ಯಾಂಚೆಸ್ಟರ್‌ನ ಗಿರಣಿಗಳಿಂದ ಬರುವ ನೂಲಿಗೆ ಪೈಪೋಟಿ ಒಡ್ಡಿ ಅದನ್ನು ಹಿಮ್ಮೆಟ್ಟಿಸಬೇಕೆಂದರೆ ನಮ್ಮ ಚರಖಾ ಸುಧಾರಿಸಬೇಕೆಂದು ಅವರು ಬಯಸಿದ್ದರು.
ಇಂದು ಖಾಸಗಿ ಕಂಪೆನಿಗಳ ಲಾಭಾಂಶವನ್ನು ಹೆಚ್ಚಿಸಬಲ್ಲ ಉತ್ಪಾದನೆಗಳಲ್ಲಿ ನಿತ್ಯವೂ ಕ್ರಾಂತಿಕಾರಿ ಸುಧಾರಣೆಗಳನ್ನು ನಾವು ಕಾಣುತ್ತೇವೆ ವಿನಾ ಜನರ ಅಸಲೀ ಸಂಕಷ್ಟಗಳನ್ನು ಅಥವಾ ರಾಷ್ಟ್ರದ ಬುನಾದಿ ಸಮಸ್ಯೆಗಳನ್ನು ಪರಿಹರಿಸಬಲ್ಲ ನಿಟ್ಟಿನಲ್ಲಿ ಸಂಶೋಧನೆಗಳು ತೀರಾ ಕಡಿಮೆ. ಸರ್ಕಾರ ತಾನಾಗಿ ಆ ಹೊಣೆಯನ್ನು ತನ್ನ ಊಳಿಗದಲ್ಲಿರುವ ವಿಜ್ಞಾನಿಗಳ ಮೇಲೆ ಹೊರಿಸಬೇಕಿತ್ತು; ಇಲ್ಲವೇ ದೊಡ್ಡ ದೊಡ್ಡ ಬಹುಮಾನಗಳನ್ನು ಘೋಷಿಸಿ ಖಾಸಗಿ ಪ್ರತಿಭೆಗೆ ಅವಕಾಶ ಮಾಡಿಕೊಡಬೇಕಿತ್ತು. ಸಮಸ್ಯೆಗಳೇನು ಸಾವಿರ ಇವೆ.
ಸವುಳು ನೀರನ್ನು ಸಿಹಿನೀರನ್ನಾಗಿ ಪರಿವರ್ತಿಸಬಲ್ಲ ಸರಳ ಉಪಾಯ ಇದೆಯೆ? ಹಳ್ಳಿಯ ಹೆಣ್ಣುಕೂಲಿಗಳು ಬೆನ್ನು ಬಾಗಿಸದೆ ನಾಟಿ ಮಾಡಬಲ್ಲ ಸರಳ ವಿಧಾನ ಇದೆಯೆ? ಸಾಮೆ, ನವಣೆಯಂಥ ಪೌಷ್ಟಿಕ ಕಿರುಧಾನ್ಯಗಳನ್ನು ತಮ್ಮೂರಲ್ಲೇ ಸಂಸ್ಕರಿಸಬಲ್ಲ ಪುಟ್ಟ ಯಂತ್ರವೊಂದು ಸಾಧ್ಯವೆ?
ಮಣ್ಣಿನ ಮಕ್ಕಳ ಹಳೆಯ ಸಮಸ್ಯೆಗಳಿಗಂತೂ ಪರಿಹಾರ ಇಲ್ಲ; ಅಭಿವೃದ್ಧಿಯ ಹೆಸರಿನಲ್ಲಿ ಹುಟ್ಟುವ ಹೊಸ ಸಮಸ್ಯೆಗಳಿಗಾದರೂ ಪರಿಹಾರ ಹುಡುಕಲು ಸಾಧ್ಯವೆ? ಕೆಡವಿ ಬೀಳಿಸಿದ ಹಳೆ ಮನೆಗಳ ಕಚಡಾಗಳನ್ನು ಕಂಡಕಂಡಲ್ಲಿ ಸುರಿಯುವ ಬದಲು, ಅವುಗಳಿಂದಲೇ ಹೊಸ ಇಟ್ಟಿಗೆ ತಯಾರಿಸಲು ಸಾಧ್ಯವೆ? ಅಡುಗೆ ಬೇಯಿಸಲು ತುಣುಕು ಕಟ್ಟಿಗೆಗಾಗಿ ಉರಿ ಬಿಸಿಲಲ್ಲಿ ಅಲೆಯುವ ಬಳ್ಳಾರಿಯ ಯಲ್ಲಮ್ಮನಿಗೆಂದು ಅಲ್ಪವೆಚ್ಚದ ಒಂದು ಸೌರ ಒಲೆಯನ್ನು ನಿರ್ಮಿಸಲು ಸಾಧ್ಯವೆ? ಕಾಡು- ಕೆರೆಗಳನ್ನೆಲ್ಲ ಕಬಳಿಸುತ್ತ ವಿಸ್ತರಿಸುವ ಲಂಟಾನಾ, ಐಪೋಮಿಯಾ, ಯುಪಟೋರಿಯಂ ಕಳೆಸಸ್ಯಗಳನ್ನೇ ಒಣಗಿಸಿ, ಒತ್ತಿ, ಗಟ್ಟಿ ಹಲಗೆಗಳನ್ನು, ಶೋಕೇಸ್‌ಗಳನ್ನು ಮಾಡಲು ಸಾಧ್ಯವೆ? ವಿಸ್ತರಿಸುತ್ತಿರುವ ಮರುಭೂಮಿಯಲ್ಲಿ ಮತ್ತೆ ಸುಲಭವಾಗಿ ಗಿಡಮರ ಬೆಳೆಸಲು ಸಾಧ್ಯವೆ?
ಈ ಕೊನೆಯ ಪ್ರಶ್ನೆಗೆ ಹೆಚ್ಚು ತಲೆ ಬಿಸಿ ಅಗತ್ಯವಿಲ್ಲ. ಅದಕ್ಕೆ ಆಗಲೇ ಉತ್ತರ ಸಿಕ್ಕಿದೆ: ಅಮೆರಿಕದ ‘ಪಾಪ್ಯುಲರ್ ಸೈನ್ಸ್’ ಪತ್ರಿಕೆ ಏರ್ಪಡಿಸಿದ್ದ ಸಂಶೋಧನಾ ಸ್ಪರ್ಧೆಯಲ್ಲಿ ‘ಗಿಡ ಬೆಳೆಸುವ ಬುಟ್ಟಿ’ಗೆ ಮೊದಲ ಬಹುಮಾನ ಸಿಕ್ಕಿದೆ. ಪೀಯ್ಟರ್ ಹೊಫ್ ಎಂಬಾತನ ಈ ತೂತುಬುಟ್ಟಿಯನ್ನು ಎಂಥ ಬೆಂಗಾಡಿನಲ್ಲಾದರೂ ಇಟ್ಟು ಅದರ ತೂತಿನಲ್ಲಿ ಬೀಜ ಹಾಕಿಡಿ; ಬೇಸಿಗೆಯೇ ಆಗಿದ್ದರೂ ಬೀಜ ಮೊಳಕೆಯೊಡೆದು ಸಸಿ ಮೇಲೇರುತ್ತದೆ.
ಒಂದು ವರ್ಷದ ನಂತರ ಮೆಲ್ಲಗೆ ಬುಟ್ಟಿಯನ್ನು ಎತ್ತಿ, ಸಸ್ಯವನ್ನು ಅದರ ಪಾಡಿಗೆ ಬಿಟ್ಟು, ಅದೇ ಬುಟ್ಟಿಯನ್ನು ಬೇರೆಡೆ ಇಟ್ಟು ಇನ್ನೊಂದು ಬೀಜ ಊರಬಹುದು.
‘ಗ್ರೋಯಾಸಿಸ್ ಬಾಕ್ಸ್’ ಹೆಸರಿನ ಎರಡು ಅಡಿ ವ್ಯಾಸದ ಈ ಪ್ಲಾಸ್ಟಿಕ್ ಬುಟ್ಟಿ ತನ್ನೊಳಗೆ ಸಾಕಷ್ಟು ವೈಜ್ಞಾನಿಕ ತಥ್ಯಗಳನ್ನು ತುಂಬಿಕೊಂಡಿದೆ. ಗಾಳಿಯಲ್ಲಿನ ತೇವಾಂಶವೇ ನಸುಕಿನಲ್ಲಿ ಇಬ್ಬನಿ ರೂಪದಲ್ಲಿ ಸಂಗ್ರಹವಾಗಿ ಬೀಜದ ಮೇಲೆ ಬೀಳುವಂತೆ ಇದರಲ್ಲಿ ವ್ಯವಸ್ಥೆ ಇದೆ. ಬುಟ್ಟಿಯಲ್ಲಿ ತುಂಬಿಟ್ಟ ನೀರು ಒಂದು ಬತ್ತಿಯ ಮೂಲಕ ತಿಂಗಳುಗಟ್ಟಲೆ ತೊಟ್ಟಿಕ್ಕುವಂತೆ ಮಾಡಲಾಗಿದೆ. ಸಸ್ಯ ತುಸು ಹೆಚ್ಚಿನ ನೀರನ್ನು ಹುಡುಕುತ್ತ ತನ್ನ ಲೋಮನಾಳಗಳನ್ನು ಆಳದವರೆಗೆ ಇಳಿಸಲು ಪ್ರೇರಣೆ ನೀಡುವಂತೆ ಬತ್ತಿಯ ಮೂಲಕ ತುಸುವೇ ತುಸು ನೀರು ಇಳಿಯುವಂತೆ ಮಾಡಲಾಗಿದೆ. ಪಕ್ಷಿಗಳ ಪಿಚಕಿಯಲ್ಲಿರುವ ಬೀಜ ಎಲ್ಲೋ ಬಂಡೆಗಳ ಬಿರುಕಿನ ಮೇಲೂ ಬಿದ್ದು ಗಿಡವಾಗಿ ಬೆಳೆಯುವುದರ ಹಿಂದಿನ ನಿಸರ್ಗ ತತ್ವವನ್ನು ಕೂಲಂಕಷ ಅಧ್ಯಯನ ಮಾಡಿ ಅದನ್ನಿಲ್ಲಿ ಅಳವಡಿಸಲಾಗಿದೆ ಎಂದು ಹೊಫ್ ಹೇಳುತ್ತಾರೆ (ಹೆಚ್ಚಿನ ವಿವರ ಮತ್ತು ಚಲನಶೀಲ ಗ್ರಾಫಿಕ್ ವಿನ್ಯಾಸಕ್ಕೆ ವೆಬ್‌ಸೈಟ್http://www.groasis.com /page/uk/principle. php ಇಲ್ಲಿ ನೋಡಬಹುದು. ನಮ್ಮ ಅರಣ್ಯಾಧಿಕಾರಿಗಳಿಗೂ ಅದನ್ನು ತೋರಿಸಬಹುದು).
‘ಪಾಪ್ಯುಲರ್ ಸೈನ್ಸ್’ ಪತ್ರಿಕೆ ನಡೆಸಿದ ಈ ವರ್ಷದ ಸ್ಪರ್ಧೆಗೆ ಹೈಟೆಕ್‌ಗಳಲ್ಲೇ ಹೈಟೆಕ್ ಎನಿಸಿದ ಆಪಲ್ ಕಂಪೆನಿಯ ‘ಐಪ್ಯಾಡ್’ ಬಂದಿತ್ತು; ಬ್ಯಾಟರಿ ಶಕ್ತಿಯಿಂದಲೂ ಚಲಿಸಬಲ್ಲ ಪೋರ್ಶ್‌ನ ಹೈಬ್ರಿಡ್ ಸೂಪರ್ ಕಾರ್ ಬಂದಿತ್ತು. ಅಂಥ 119 ಸ್ಪರ್ಧಿಗಳನ್ನು ಹಿಂದಿಕ್ಕಿ ಗ್ರೋಯಾಸಿಸ್ ಜಯಿಸಿದೆ.
‘ಜಗತ್ತಿನ ಅತಿ ದೊಡ್ಡ ಸಮಸ್ಯೆಗೆ ಅತಿ ಸರಳ ಪರಿಹಾರ’ ಎಂದು ತೀರ್ಪುಗಾರರು ಈ ಬುಟ್ಟಿಯನ್ನು ಬಣ್ಣಿಸಿದ್ದಾರೆ. ಇಷ್ಟಾದರೂ ಮುಖವನ್ನು ಬೆಳ್ಳಗೆ ಮಾಡುವ ಕ್ರೀಮ್ ಕುರಿತ ಸಂಶೋಧನೆಯೇ ಅನೇಕರಿಗೆ ಮಹತ್ವದ್ದಾಗಿ ಕಾಣಬಹುದು. ಮುಖ ಬೆಳ್ಳಗಿರಬೇಕು, ಸುಕ್ಕುಗಳು ಕಾಣಕೂಡದು, ಬೊಕ್ಕತಲೆ ಆಗಬಾರದು….
ಇಂಥ ಚಿಂತನೆಗಳೇ ಅನುಕೂಲಸ್ಥ ಸಮಾಜದ ಆದ್ಯತೆಗಳಾಗಿದ್ದರೆ ವಿಜ್ಞಾನ ಸಹಜವಾಗಿಯೇ ಅತ್ತ ದಾಂಗುಡಿ ಇಡುತ್ತದೆ. ಇಟ್ಟಿದೆ ಕೂಡ. ಹಾರ್ವರ್ಡ್ ವಿಜ್ಞಾನಿಗಳು ಮುದಿ ಇಲಿಯೊಂದಕ್ಕೆ ಅದೆಂಥದೊ ಔಷಧ ಕೊಟ್ಟು ಅದರ ಯೌವನ ಮರುಕಳಿಸುವಂತೆ ಮಾಡಿದ್ದಾರೆ. ಅದೀಗ ಈ ವಾರದ ವಿಜ್ಞಾನಲೋಕದ ಬಹುದೊಡ್ಡ ಸುದ್ದಿಯಾಗಿದೆ.
ಇನ್ನೇನು ಮನುಷ್ಯರಿಗೂ ಅದೇ ಔಷಧ ಸಿಗುವ ದಿನ ದೂರವಿಲ್ಲ. ವಯಸ್ಸಿಗೆ ಬಂದವರಷ್ಟೇ ಅಲ್ಲ, ನಿವೃತ್ತಿ ವಯಸ್ಸಿಗೆ ಬಂದವರೂ ಹೊಸ ಸಂಶೋಧನೆಯ ಫಲಿತಾಂಶಕ್ಕೆ ಕಾದು ಕೂರುವಂತಾಗಿದೆ.
Filed under: ನಾಗೇಶ ಹೆಗಡೆ ಕಾಲಂ
ವಿಜ್ಞಾನ ತಂತ್ರಜ್ಞಾನಗಳಿಗೆ ಮಹತ್ವ ಕೊಡದ ನಮ್ಮ ಶತಕೋಟ್ಯಾಧಿಪತಿಗಳ ಕುರಿತು ಖೇದವೆನಿಸುತ್ತದೆ. ವಿಜ್ಞಾನಕ್ಕಿರುವ ಸಾಮಾಜಿಕ ಜವಾಬ್ಧಾರಿ ಇನ್ಯಾವುದಕ್ಕೂ ಇಲ್ಲ
Sir, very unfortunate state of affairs indeed. “Hottege hittilla, juttide mallige hoovu” anno tharad jana jaasti aadre heege!!