ನಾಗೇಶ್‌ ಹೆಗಡೆ : ಮರಣಶಯ್ಯೆಯಲ್ಲಿ ಇಂಡಿಯಂ, ದೂಳಿನಲ್ಲಿ ಪ್ಲಾಟಿನಂ

ಇಂಧನ ತೈಲವೇ ಜಾಗತಿಕ ಸಂಘರ್ಷಗಳಿಗೆ ಕಾರಣವೆಂದು ತಿಳಿದಿದ್ದವರು ಈಗ ಅದಕ್ಕಿಂತ ಮಹತ್ವದ ವಿರಳ ಲೋಹಗಳತ್ತ ಗಮನ ಹರಿಸುತ್ತಿದ್ದಾರೆ. ಜಗತ್ತಿನ ಕೆಲವೇ ಕೆಲವು ತಾಣಗಳಲ್ಲಿ ಸಾಂದ್ರವಾಗಿ ಅದಿರಿನ ನಿಕ್ಷೇಪಗಳಾಗಿ ಕೂತಿರುವ ಇವು ಹೊಸ ಸಂಘರ್ಷಕ್ಕೆ ನಾಂದಿ ಹಾಡುತ್ತಿವೆ.

‘ಕಬ್ಬಿಣ ಸತ್ತುಹೋಯಿತು’ ಎಂಬ ಶಿರೋನಾಮೆಯಲ್ಲಿ ಫ್ರೆಂಚ್ ಕತೆಗಾರ ಎಸ್ ಎಸ್ ಹೆಲ್ಡ್ 1932ರಲ್ಲಿ ಒಂದು ಕತೆಯನ್ನು ಬರೆದಿದ್ದ. ಫ್ರಾನ್ಸ್‌ನ ಉಕ್ಕಿನ ಕಾರ್ಖಾನೆಗೆ ಒಂದು ವಿಚಿತ್ರ ರೋಗ ತಗಲುತ್ತದೆ. ಕಬ್ಬಿಣದ ಸರಳು, ಕಂಬ, ಹಳಿಗಳೆಲ್ಲ ಗೆದ್ದಲು ಹತ್ತಿದಂತೆ ಕಂದು ಪುಡಿಪುಡಿಯಾಗಿ ಉದುರುತ್ತವೆ. ವಿಜ್ಞಾನಿಗಳು ತನಿಖೆ ನಡೆಸಲು ಹೋದಾಗ ಇನ್ನೇನೋ ಭಾನಗಡಿ ಆಗಿ ‘ಸಿಡೆರೊಸಿಸ್’ ಎಂಬ ಆ ರೋಗ ಸಾಂಕ್ರಾಮಿಕವೇ ಆಗುತ್ತದೆ. ರೋಗಾಣು ಕಾರ್ಖಾನೆಯ ಆವರಣದಿಂದ ಜಿಗಿದು ಕಬ್ಬಿಣ ಕಂಡಲ್ಲೆಲ್ಲ ದಾಳಿ ಮಾಡುತ್ತದೆ. ರೈಲು, ಬಸ್ಸು, ಹಡಗು, ಸೇತುವೆ, ಕತ್ತಿ, ಸನಿಕೆ, ಕಟ್ಟಡ, ಕೊಳವೆ, ಕೊಳಾಯಿ ಎಲ್ಲವೂ ಶಿಥಿಲವಾಗಿ, ಪುಡಿಪುಡಿಯಾಗಿ ಇಡೀ ನಾಗರಿಕತೆಯೇ ಕುಸಿದು ಶಿಲಾಯುಗಕ್ಕೆ ಮರಳುತ್ತದೆ. ಅಲ್ಲಿಂದ ಇನ್ನೊಮ್ಮೆ ಹೊಸ ಜಂಗ್ಲೀ ನಾಗರಿಕತೆಯೊಂದು ಉಗಮವಾಗಿ ಮತ್ತೆ ಭೂತ-ಪ್ರೇತ, ಮಾಟ-ಮಂತ್ರ. ನಾಗಪೂಜೆ, ನರಬಲಿಯಂಥ ಮೂಢನಂಬಿಕೆಗಳ ಹೊಸಯುಗ ಆರಂಭವಾಗುತ್ತದೆ.

ಇದು ನಿಜವಾಗುವಂಥ ಕತೆಯೇನಲ್ಲ ಬಿಡಿ. ಕಬ್ಬಿಣದ ಅದಿರಿನ ಸಹವಾಸದಿಂದಾಗಿ ಹೆಚ್ಚೆಂದರೆ ಬಳ್ಳಾರಿಯ ಗ್ರಾಮೀಣ ನಾಗರಿಕತೆ ಎಕ್ಕುಟ್ಟಿ ಹೋಗಬಹುದು, ಬೇಲೇಕೇರಿಯ ಬೆಸ್ತರ ಬದುಕು ಮೂರಾಬಟ್ಟೆ ಆಗಬಹುದು; ವಿಧಾನಸೌಧದ ರಾಜಕೀಯ ಮೌಲ್ಯಗಳು ಧ್ವಂಸವಾಗಬಹುದೇ ವಿನಾ ಕಬ್ಬಿಣಕ್ಕೇನೂ ಅಪಾಯ ಬರಲಾರದು. ಕಬ್ಬಿಣವೊಂದೇ ಅಲ್ಲ, ತಾಮ್ರ, ಬೆಳ್ಳಿ, ಚಿನ್ನ, ಪಾದರಸ ಹೀಗೆ ನಿಸರ್ಗದ ಯಾವುದೇ ಧಾತುಗಳು ರೋಗಗಳಿಂದಾಗಲೀ ಪಂಚಭೂತಗಳಿಂದಾಗಲೀ ನಶಿಸುವುದಿಲ್ಲ, ನಿರ್ವಂಶವಾಗುವುದಿಲ್ಲ. ನಾಶ, ನಿರ್ವಂಶದಂಥ ದುರ್ದೆಸೆ ಏನಿದ್ದರೂ ಪ್ರಾಣಿ, ಪಕ್ಷಿಗಳಿಗೆ, ಆರ್ಕಿಡ್ ಸಸ್ಯಗಳಿಗೆ,  ಔಷಧ ಮೂಲಿಕೆಗಳಿಗೆ; ಡೋಡೋ, ಕಗ್ಗಾ, ಚೀತಾ, ಈಗ ಘೇಂಡಾಗಳಿಗೆ, ಹುಲಿಗಳಿಗೆ ಅಷ್ಟೆ. ವಿನಾ, ಅವುಗಳನ್ನು ಸದೆಬಡಿಯುವ ಕತ್ತಿಗಳು, ಭರ್ಜಿಗಳು, ಕುಣಿಕೆಗಳು, ಕಾಡತೂಸಿನ ಚರೆಗಳಿಗೆ ಸೇರಿಸುವ ಸೀಸ ಇವೆಂದೂ ನಾಶವಾಗಲಾರವು. ಹಾಗೆಯೇ ವನ್ಯಜೀವಹರಣಕ್ಕೆ ಬಳಸುವ ಆರ್ಸೆನಿಕ್, ಕ್ರೋಮಿಯಂ, ರಂಜಕ, ಮೆಟಾಸಿಡ್ ಕೆಮಿಕಲ್ ಪಾಷಾಣಗಳು ನಿರ್ವಂಶವಾಗಲಾರವು.

ಹಾಗೆಂದು ನಾವೆಲ್ಲ ಓದಿ ತಿಳಿದಿದ್ದೇವೆ. ಆದರೆ ನಿಜವೆ? ಅಸಿಮೊವ್ ನೆನಪಿನ ವೆಬ್‌ಸೈಟ್‌ನಲ್ಲಿ ಎರಡು ವರ್ಷಗಳ ಹಿಂದೆ  ‘ಸಾವಿನಂಚಿನಲ್ಲಿ ಗ್ಯಾಲಿಯಂ’ ಹೆಸರಿನ ಲೇಖನವೊಂದು ಪ್ರಕಟವಾಯಿತು. ಖನಿಜ ನಿಕ್ಷೇಪಗಳಲ್ಲಿ ತೀರ ಅಲ್ಪ ಪ್ರಮಾಣದಲ್ಲಿ ಸಿಗುತ್ತಿರುವ ಗ್ಯಾಲಿಯಂ, ಇಂಡಿಯಂ ಮುಂತಾದ ಧಾತುಗಳನ್ನು ಇಂದು ಟಿವಿ, ಕಂಪ್ಯೂಟರ್, ಮೊಬೈಲ್‌ಗಳಂಥ ವಿದ್ಯುನ್ಮಾನ ಸಾಧನಗಳಲ್ಲಿ ನಾವು ತೀರ ಹೆಚ್ಚಾಗಿ ಬಳಸುತ್ತಿದ್ದೇವೆ. ಅವು ಮುಗಿದು ಹೋದರೆ  ‘ಕಬ್ಬಿಣ ಸತ್ತು ಹೋ….’ದಾಗಿನ ವಿಕಲ್ಪವೇ ಎಲ್ಲೆಡೆ ಸಾಕಾರಗೊಳ್ಳುತ್ತದೆ.

ನಿರ್ವಂಶವಾಗಬಲ್ಲ ನಿರ್ಜೀವ ದ್ರವ್ಯಗಳ ಪಟ್ಟಿಯಲ್ಲಿ ಪೆಟ್ರೋಲು- ಡೀಸೆಲ್ ಮೊದಲ ಸ್ಥಾನದಲ್ಲಿವೆ, ನಿಜ. ಅವುಗಳ ‘ಗರಿಷ್ಠ ಬಳಕೆಯ ಹಂತ’ದಲ್ಲಿ ನಾವಿದ್ದೇವೆಂದು ಸಮೀಕ್ಷೆಗಳು ಹೇಳುತ್ತವೆ. ಇನ್ನೇನಿದ್ದರೂ ಖನಿಜ ತೈಲಗಳ ಉತ್ಪಾದನೆ ದಿನದಿನಕ್ಕೆ ಕಡಿಮೆಯಾಗುತ್ತ, ಬೆಲೆ ದಿನದಿನಕ್ಕೆ ಏರುತ್ತ, ನಾನಾ ಬಗೆಯ ಸಂಘರ್ಷಗಳಿಗೆ ಕಾರಣವಾಗುತ್ತ ದುರ್ಬಲರ ಬದುಕನ್ನು ನರಕಕ್ಕೆ ದೂಡುತ್ತ ಹೋಗುತ್ತದೆ. ಕಳೆದ ವರ್ಷ ಜಗತ್ತಿನ ಎಲ್ಲ 840 ಪೆಟ್ರೋಲಿಯಂ ನಿಕ್ಷೇಪಗಳ ಸಮೀಕ್ಷಾ ವರದಿಯಲ್ಲಿ ‘ಗರಿಷ್ಠ ಬಳಕೆ’ (ಪೀಕ್ ಆಯಿಲ್) ಅವಧಿ ಮುಗಿಯಿತು ಎಂತಲೂ ಹೇಳಲಾಗಿದೆ. ಅದೇ ರೀತಿ ‘ನೀರಿನ ಗರಿಷ್ಠ ಬಳಕೆ’ (ಪೀಕ್ ವಾಟರ್),  ‘ಮರಮುಟ್ಟುಗಳ ಗರಿಷ್ಠ ಬಳಕೆ’ (ಪೀಕ್ ವುಡ್) ಅವಧಿಗಳೂ ನಿಗದಿಗೊಳ್ಳುತ್ತಿವೆ. ಈಗ ಚರ್ಚೆಗೆ ಬಂದಿರುವುದು ‘ಪೀಕ್ ಮೆಟಲ್’, ಅಂದರೆ ಖನಿಜಗಳ, ಅದರಲ್ಲೂ ವಿರಳ ಖನಿಜಗಳ ಗರಿಷ್ಠ ಬಳಕೆಯ ವಿಚಾರ.

ಪೆಟ್ರೋಲಿಯಂ ಯುಗ ಮುಗಿದರೆ ಭೂಮಿಗೆ ಒಳ್ಳೆಯದೇ ಆದೀತೆನ್ನುವವರು ಸಾಕಷ್ಟಿದ್ದಾರೆ. ಅದಕ್ಕೆ ಬದಲಿಯಾಗಿ ಬೇರೆ ಶಕ್ತಿಮೂಲಗಳ ಬಳಕೆ ಈಗಾಗಲೇ ಆರಂಭವಾಗಿವೆ. ಜರ್ಮನಿಯಲ್ಲಿ ಮನೆಮನೆಗಳಲ್ಲಿ ಸೌರ ವಿದ್ಯುತ್ ಉತ್ಪಾದಿಸಿ ಗ್ರಿಡ್‌ಗೆ ಮಾರುವ ಕಾರ್ಯಾಚರಣೆ ಅದೆಷ್ಟು ಹೆಚ್ಚಾಗಿದೆ ಎಂದರೆ ಅಲ್ಲಿ ಏಕಕಾಲಕ್ಕೆ ಅತಿ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಹರಿದು  ‘ಇಡೀ ವಿದ್ಯುತ್ ಜಾಲ ಕುಸಿಯುವ ಭೀತಿ ತಲೆದೋರಿದೆ’ ಎಂದು ಕಳೆದ ವಾರ ‘ನ್ಯೂ ಸೈಂಟಿಸ್ಟ್’ ಪತ್ರಿಕೆ ವರದಿ ಮಾಡಿತ್ತು.

ಬ್ಯಾಟರಿಚಾಲಿತ ಕಾರುಗಳ ಉತ್ಪಾದನೆ ಹೆಚ್ಚುತ್ತಿದೆ. ವಿಮಾನಗಳೂ ಬ್ಯಾಟರಿ ಶಕ್ತಿಯಿಂದಲೇ ಹಾರುವಂತೆ ಮಾಡಲು ಯತ್ನಗಳು ನಡೆಯುತ್ತಿವೆ. ರೈಲು, ಹಡಗುಗಳಿಗೆ ತೈಲವೇ ಬೇಕೆಂದಿಲ್ಲ. ಕಲ್ಲಿದ್ದಲೂ ನಡೆಯುತ್ತದೆ. ನೀರಿನ ‘ಗರಿಷ್ಠ ಬಳಕೆ’ಯ ಯುಗದಲ್ಲಿ ನಾವಿದ್ದೇವಾದರೂ ಅದು ಮುಗಿಯುವ ಭಯವಿಲ್ಲ. ಬದಲಿಗೆ ಭೂಮಿ ಬಿಸಿಯಾಗುತ್ತ ಹೋದಾಗ ಧ್ರುವ ಪ್ರದೇಶಗಳು ಕರಗಿ, ಕೆಲವೆಡೆ ಯದ್ವಾತದ್ವಾ ಅತಿವೃಷ್ಟಿಯಾದೀತು. ನೀರು ಸಾಕಪ್ಪಾ ಸಾಕು ಎನ್ನುವಂತೆಯೂ ಆದೀತು. ಮರಮುಟ್ಟುಗಳ ಕೊರತೆಯಾದರೆ ಇತರ ಜೀವ ಜಂತುಗಳ ಅವಸಾನ ಚುರುಕಾದೀತೇ ವಿನಾ ಮನುಷ್ಯನಿಗೆ ಚಿಂತೆಯಿಲ್ಲ. ಮರಗಳ ಅವಲಂಬನೆಯನ್ನು ಮೀರಿ ಆತ ಬೆಳೆದಿದ್ದಾನೆ.

ಆದರೆ ವಿರಳ ಲೋಹಗಳ ವಿಚಾರ ಹಾಗಲ್ಲ. ಅವುಗಳ ಮೇಲೆ ನಮ್ಮ ಅವಲಂಬನೆ ದಿನದಿನಕ್ಕೆ ಹೆಚ್ಚುತ್ತಿದೆ. ಅದರ ಬಳಕೆಯ ವಿರಾಟ್ ವಿಶ್ವರೂಪವನ್ನು ಮೊನ್ನೆ ಚೀನಾದಲ್ಲಿ ಏಷ್ಯನ್ ಗೇಮ್ಸ್‌ನ ಉದ್ಘಾಟನೆಯಲ್ಲಿ ನಾವೆಲ್ಲ ಕಂಡಿದ್ದೇವೆ. ಅಲ್ಲಿ ಯಾವುದು ನೀರು, ಯಾವುದು ನೆಲ, ಯಾವುದು ವಿಡಿಯೊ ಆಕಾಶ, ಯಾವುದು ಅಸಲೀ ಆಕಾಶ, ಯಾವುದು ಹಗ್ಗ , ಯಾವುದು ಲೇಸರ್ ಪುಂಜ ಎಂಬುದೇ ಗೊತ್ತಾಗದ ಮಾಯಾಲೋಕ ಸೃಷ್ಟಿಯಾಗಿ, ಅಲ್ಲಿಂದ ಹೊರಟ ಬಿಂಬಗಳು ನಮ್ಮ ಟಿವಿ, ಲ್ಯಾಪ್‌ಟಾಪ್, ಡಿವಿಡಿಗಳಲ್ಲಿ, ಪಾಮ್‌ಟಾಪ್, ಮೊಬೈಲ್‌ಗಳಲ್ಲೂ ಮೂಡಿದಾಗ ಆಗ ಬಳಕೆಯಾದ ಶತಕೋಟಿ ಸಾಧನಗಳಲ್ಲೆಲ್ಲ ವಿರಳ ಲೋಹಗಳ ಬಳಕೆಯಾಗಿದೆ.

ಉದಾಹರಣೆಗೆ: ಗ್ಯಾಲಿಯಂ ಎಂಬ ಲೋಹವನ್ನು ಟಿವಿ ಮತ್ತು ಕಂಪ್ಯೂಟರ್‌ಗಳ ಸಪಾಟು ಪರದೆಯ ನಿರ್ಮಾಣದಲ್ಲಿ ಬಳಸಲಾಗುತ್ತದೆ. ಮಸೂರಗಳ ಮುಖಲೇಪನಕ್ಕೆ, ಅತಿಶಾಖದಲ್ಲಿ ಕೆಲಸ ಮಾಡುವ ಯಂತ್ರಗಳ ಕವಾಟಗಳಿಗೆ ಹಾಗೂ ದ್ರವಸ್ಫಟಿಕಗಳ ತಯಾರಿಕೆಗೆ ಬಳಕೆಯಾಗುತ್ತಿದೆ. ಭೂಮಿಯ ಶೇ 0.0015 ಪ್ರಮಾಣದಲ್ಲಿ ಸಿಗುವ ಈ ಲೋಹ ಎಲ್ಲೂ ನಿಕ್ಷೇಪ ರೂಪದಲ್ಲಿಲ್ಲ. ಸತುವು ಮತ್ತು ಅಲ್ಯೂಮಿನಿಯಂ ಅದಿರನ್ನು ಶುದ್ಧಗೊಳಿಸುವಾಗ ಹೊರಬೀಳುವ ಕಿಟ್ಟದಲ್ಲಿ ಇದು ಅಲ್ಪ ಪ್ರಮಾಣದಲ್ಲಿ ಸಿಗುತ್ತದೆ. ಅದೇ ರೀತಿ ಇಂಡಿಯಂ ಮತ್ತು ಹಾಫ್ನಿಯಂ ಕೂಡ. ಬಳಕೆಯ ಪ್ರಮಾಣ ಹೆಚ್ಚುತ್ತಿದೆ, ಲಭ್ಯತೆಯ ಪ್ರಮಾಣ ಕಡಿಮೆಯಾಗುತ್ತಿದೆ.

ಆವರ್ತನ ಕೋಷ್ಟಕದಲ್ಲಿನ ಲ್ಯಾಂಥನೈಡ್ ಸರಣಿಯ 14 ಮೂಲವಸ್ತುಗಳಿಗೆ  ‘ರೇರ್ ಅರ್ಥ್ ಎಲಿಮೆಂಟ್ಸ್’ ಎನ್ನುತ್ತಾರೆ (ಕನ್ನಡದಲ್ಲಿ ‘ವಿರಳ ಭಸ್ಮದ ಧಾತುಗಳು’). ವಿದ್ಯುನ್ಮಾನ ಉಪಕರಣಗಳ ಉತ್ಪಾದನೆಯಲ್ಲಿ ಇವುಗಳಿಗೆ ಬೇಡಿಕೆ ಅದೆಷ್ಟು ಹೆಚ್ಚುತ್ತಿದೆ ಎಂದರೆ, ಜಾಗತಿಕ ರಾಜಕೀಯರಂಗದಲ್ಲಿ ಜಟಾಪಟಿ ಏಳುತ್ತಿದೆ, ಬಿಕ್ಕಟ್ಟು  ತಲೆದೋರಿದೆ.

ಈಚೆಗೆ ಚೀನಾ- ಜಪಾನ್ ನಡುವೆ ಶೀತಲ ಸಮರ ಹೊತ್ತಿಕೊಂಡಿತ್ತು. ಚೀನಾದ ಮೀನುಗಾರರಿದ್ದ ದೋಣಿಯೊಂದು ಜಪಾನೀ ಸಮುದ್ರಕ್ಕೆ ಬಂತಂತೆ. ಜಪಾನೀಯರು ಕುಪಿತಗೊಂಡು ದೋಣಿಯ ಕ್ಯಾಪ್ಟನ್‌ನನ್ನು ಬಂಧಿಸಿದರಂತೆ. ಅದು ಮೇಲ್ನೋಟದ ಚಿಲ್ಲರೆ ಘಟನೆ. ಆಗಿದ್ದೇನೆಂದರೆ ಅತ್ಯಾಧುನಿಕ ಎಲೆಕ್ಟ್ರಾನಿಕ್ ಸಾಧನಗಳಿಗೆ ಬೇಕಿರುವ ರೇರ್ ಅರ್ಥ್ ಮೂಲ ವಸ್ತುಗಳಲ್ಲಿ ಶೇ 99ರಷ್ಟು ಚೀನಾದ ಗಣಿಗಳಿಂದಲೇ ಬರುತ್ತಿವೆ. ಅವು ಗಣಿಗಳಿಂದ ಎದ್ದು ಜಪಾನಿನಲ್ಲಿ ಸಂಸ್ಕರಣೆಗೊಂದು ಶುದ್ಧಲೋಹದ ಗಟ್ಟಿಗಳಾಗಿ ವಿವಿಧ ದೇಶಗಳ ಕಂಪೆನಿಗಳಿಗೆ ಹಾಗೂ ವಿವಿಧ ಮಿಲಿಟರಿ ಉಪಕರಣ ತಯಾರಿಕೆಗಳಿಗೆ ಹೋಗುತ್ತಿವೆ. ಇದೀಗ ಚೀನಾ ಹಠಾತ್ತಾಗಿ ರೇರ್‌ಅರ್ಥ್ ಗಣಿಗಾರಿಕೆಯನ್ನು ನಿಲ್ಲಿಸಿದೆ. ತನಗೆ ಬೇಕಿದ್ದುದನ್ನು ತಾನೇ ಸಂಸ್ಕರಣೆ ಮಾಡತೊಡಗಿದೆ.

ಇದರಿಂದಾಗಿ ಜಪಾನ್‌ಗೆ ಡಬಲ್ ಧಕ್ಕೆಯಾಗಿದೆ. ಅಲ್ಲಿನ ಅದಿರು ಸಂಸ್ಕರಣ ಘಟಕಗಳೆಲ್ಲ ಸ್ಥಗಿತಗೊಂಡಿವೆ. ಮೇಲಾಗಿ ಶುದ್ಧರೂಪದ ರೇರ್‌ಅರ್ಥ್ ಲೋಹಗಳನ್ನು ಮೊಬೈಲ್, ಟಿವಿ, ಕಂಪ್ಯೂಟರ್‌ಗಳಲ್ಲಿ ಹಾಗೂ ಹೈಬ್ರಿಡ್ ಕಾರ್‌ಗಳಲ್ಲಿ ಬಳಸುತ್ತಿದ್ದ ಜಪಾನೀ ಕಂಪೆನಿಗಳೆಲ್ಲ ಹಸಿದು ಕೂರುವಂತಾಗಿದೆ. ಕುಪಿತ ಜಪಾನ್ ಚೀನಾಕ್ಕೆ ತುಸು ಚುರುಕು ಮುಟ್ಟಿಸಲು ಹೊರಟಿದೆ.

ಚೀನಾದ ಗಣಿ ದಿಗ್ಬಂಧನ ನೋಡಿ ಅಮೆರಿಕ ಧಿಗ್ಗನೆದ್ದಿದೆ. ಎಂಟು ವರ್ಷಗಳ ಹಿಂದೆ ಅಮೆರಿಕ ತನ್ನ ಏಕೈಕ ರೇರ್‌ಅರ್ಥ್ ಗಣಿಯನ್ನು ಮುಚ್ಚಿತ್ತು. ಏಕೆಂದರೆ ಅದಿರಿನ ಗಣಿಗಾರಿಕೆ ಹಾಗೂ ಸಂಸ್ಕರಣೆ ತೀರಾ ವಿಷಕಾರಿ ಎಂಬುದು ಅದರ ಅರಿವಿಗೆ ಬಂದಿತ್ತು. ನಂತರ ಮೆಲ್ಲಮೆಲ್ಲಗೆ ಇಡೀ ಸಂಸ್ಕರಣ ತಂತ್ರಜ್ಞಾನವನ್ನೇ ಚೀನಾಕ್ಕೆ ವರ್ಗಾಯಿಸಿ ಅಲ್ಲಿನವರ ಕೈಯಿಂದಲೇ ತನಗೆ ಬೇಕಿದ್ದುದನ್ನು ಶುದ್ಧರೂಪದಲ್ಲಿ ಪಡೆಯತೊಡಗಿತ್ತು. ಈಗ ಚೀನಾ ಉಲ್ಟಾ ಹೊಡೆದಿದ್ದರಿಂದ ಮತ್ತೆ ತನ್ನ ಗಣಿಗಾರಿಕೆಗೆ ಚಾಲನೆ ಕೊಡಲೆಂದು ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಿದೆ.

ಇಂಧನ ತೈಲವೇ ಜಾಗತಿಕ ಸಂಘರ್ಷಗಳಿಗೆ ಕಾರಣವೆಂದು ತಿಳಿದಿದ್ದವರು ಈಗ ಅದಕ್ಕಿಂತ ಮಹತ್ವದ ವಿರಳ ಲೋಹಗಳತ್ತ ಗಮನ ಹರಿಸುತ್ತಿದ್ದಾರೆ. ಜಗತ್ತಿನ ಕೆಲವೇ ಕೆಲವು ತಾಣಗಳಲ್ಲಿ ಸಾಂದ್ರವಾಗಿ ಅದಿರಿನ ನಿಕ್ಷೇಪಗಳಾಗಿ ಕೂತಿರುವ ಇವು ಹೊಸ ಸಂಘರ್ಷಕ್ಕೆ ನಾಂದಿ ಹಾಡುತ್ತಿವೆ. ಇಂದಿನ ಮಾಹಿತಿ ಕ್ರಾಂತಿ, ಸಂಚಾರ ಕ್ರಾಂತಿ, ವೈದ್ಯಕೀಯ ಕ್ರಾಂತಿ, ಮನರಂಜನ ಕ್ರಾಂತಿಗಳ ಬೆನ್ನೇರಿ ಈ ಅಪರೂಪದ ಲೋಹಗಳು ಮನೆಮನೆಗಳನ್ನು ಹೊಕ್ಕು ಕ್ರಮೇಣ ತಿಪ್ಪೆಗೆ ಸೇರುತ್ತಿವೆ. ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ಸಿಗುವ ಕೆಲವಂತೂ ಇನ್ನೇನು ಮುಗಿಯುವ ಹಂತದಲ್ಲಿವೆ. ಪ್ಲಾಟಿನಂ, ಗ್ಯಾಲಿಯಂ, ಆಂಟಿಮನಿ, ಇಂಡಿಯಮ್, ಟೆಂಟಾಲಮ್ ಇವೆಲ್ಲ ಎಷ್ಟಿವೆ ಎಂಬುದನ್ನೂ ಗಣಿ ಕಂಪೆನಿಗಳು ಹೇಳುತ್ತಿಲ್ಲ. ಪ್ರತಿ ಕಿಲೋಗ್ರಾಂಗೆ ಸಾವಿರ ಡಾಲರ್ ಬೆಲೆಯುಳ್ಳ ಇಂಡಿಯಂ ಎಂಬ ಲೋಹ  ಇನ್ನು ಹತ್ತೇ ವರ್ಷಗಳಲ್ಲಿ ಮುಗಿಯಲಿದೆ ಎಂದು ಜರ್ಮನಿಯ ಆಗಸ್‌ಬರ್ಗ್ ವಿವಿಯ ವಿಜ್ಞಾನಿ ಆರ್ಮಿನ್ ರೆಲ್ಲರ್ ಹೇಳಿದ್ದಾಗಿ ವರದಿಯಾಗಿದೆ. ಹಾಫ್ನಿಯಮ್ ಎಂಬುದು 2017ರ ವೇಳೆಗೆ ಮುಗಿಯುತ್ತದಂತೆ.

‘ಮುಗಿಯುತ್ತದೆ’ ಎನ್ನುವ ಬದಲು  ‘ಚದುರಿ ಹೋಗಲಿದೆ’ ಎಂದು ಹೇಳಬೇಕು. ಎಲ್ಲೋ ಭೂಮಿಯಲ್ಲಿ ಸಾಂದ್ರವಾಗಿದ್ದ ಈ ಧಾತುಗಳು ಬಳಕೆಗೆ ಬಂದು, ‘ಇ-ವೇಸ್ಟ್’ಗಳಾಗಿ ಚೆಲ್ಲಾಡಿ ಹೋಗುತ್ತವೆ. ಕೆಲಮಟ್ಟಿಗೆ ಚಿಂದಿ ಆಯುವವರು ಕೊಳೆಗೇರಿ ಸಂದುಮೂಲೆಯಲ್ಲಿ ಅವನ್ನು ಕರಗಿಸಿ ನೀರಿಗೆ, ಗಾಳಿಗೆ ವಿಷವನ್ನು ಸೇರಿಸಿ ಅರ್ಧಂಬರ್ಧ ನಷ್ಟ ಮಾಡಿ ಮಾರುತ್ತಾರೆ.

ಆರೋಗ್ಯವೂ ನಷ್ಟ, ಅಮೂಲ್ಯ ಸಂಪತ್ತೂ ನಷ್ಟವಾಗುತ್ತದೆ. ಕೆಲವಂತೂ ನೂರಕ್ಕೆ ನೂರು ನಷ್ಟ. ಉದಾಹರಣೆಗೆ ಪೆಟ್ರೋಲ್ ಹೊಗೆಯನ್ನು ಕಮ್ಮಿ ಮಾಡಲೆಂದು ಪ್ಲಾಟಿನಂ ಲೋಹವನ್ನು ವಾಹನಗಳ ವೇಗವರ್ಧಕ ಕನ್ವರ್ಟರ್‌ನಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಸೇರಿಸುತ್ತಾರೆ. ಅದು ವಾಯುಮಂಡಲಕ್ಕೆ ಸೇರುತ್ತದೆ. ನಾಳೆ ಪೆಟ್ರೋಲ್ ಖಾಲಿಯಾಗಿ ಬ್ಯಾಟರಿ ಚಾಲಿತ ವಾಹನಗಳು ಬಂದರೆ ಅವುಗಳ ಇಂಧನಕೋಶದಲ್ಲೂ ಪ್ಲಾಟಿನಂ ಬಳಕೆಯಾಗಲಿದೆ. ಹಾಗೊಂದಾದರೆ 15 ವರ್ಷಗಳಲ್ಲಿ ಜಗತ್ತಿನ ಎಲ್ಲ ಪ್ಲಾಟಿನಂ ಚದುರಿಹೋಗುತ್ತದೆ. ಬ್ರಿಟನ್ನಿನ ಕಾರ್ಡಿಫ್ ವಿವಿಯ ಭೂವಿಜ್ಞಾನಿ ಹೇಝೆಲ್ ಪ್ರಿಚರ್ಡ್ ಎಂಬಾಕೆ ರಸ್ತೆಯ ದೂಳಿನಲ್ಲಿ ಪ್ಲಾಟಿನಂ ಎಷ್ಟಿದೆಯೆಂದು ಅಳೆಯುತ್ತ ದೂಳು ಸಂಸ್ಕರಣೆಯ ಪ್ರಸ್ತಾವನೆ ಮುಂದಿಟ್ಟಿದ್ದರು.

ಅಂದ ಹಾಗೆ, ನಮ್ಮಲ್ಲೂ ಕೇರಳದ ಕಡಲ ತೀರದ ಮೊನಝೈಟ್ ಮರಳಿನಲ್ಲಿ ಥೋರಿಯಂ ಮತ್ತು ಯುರೇನಿಯಂ ಜತೆಗೆ ಅತ್ಯಲ್ಪ ಪ್ರಮಾಣದಲ್ಲಿ ರೇರ್‌ಅರ್ಥ್ ಧಾತುಗಳ ಸಂಸ್ಕರಣೆಯೂ ನಡೆದಿದೆ. ಅಲ್ಲಿ ಅಂಗವಿಕಲ ಮಕ್ಕಳು ಜನಿಸುತ್ತಿವೆ, ಕ್ಯಾನ್ಸರ್ ರೋಗಿಗಳ ಹಾಗೂ ನಪುಂಸಕರ ಪ್ರಮಾಣ ತೀರಾ ಹೆಚ್ಚಿದೆ ಎಂದು ವೈದ್ಯ ವಿಜ್ಞಾನಿಗಳು ಹಿಂದೆ ವರದಿ ಮಾಡಿದ್ದರು. ಇದರಿಂದ ಎಚ್ಚೆತ್ತ ಅಣುಶಕ್ತಿ ಇಲಾಖೆ ಅಂಥ ಸಮೀಕ್ಷೆ, ಸಂಶೋಧನೆಗಳಿಗೆ ತನ್ನ ವಿನಾ ಯಾರೂ ತಲೆ ಹಾಕಕೂಡದೆಂದು ಎಲ್ಲ ಸ್ವತಂತ್ರ ತನಿಖೆಗಳಿಗೂ ದಿಗ್ಬಂಧನ ಹಾಕಿದೆ.

ಹಾರ್ಡ್‌ವೇರ್ ಉದ್ಯಮ ನಮ್ಮಲ್ಲಿ ಅಷ್ಟಾಗಿ ಬೆಳೆದಿಲ್ಲದ ಕಾರಣ, ರೇರ್‌ಅರ್ಥ್ ಧಾತುಗಳು ನಮ್ಮಲ್ಲೇನೂ ನಿರ್ವಂಶ ಆಗಲಿಕ್ಕಿಲ್ಲ. ಹೆಚ್ಚೆಂದರೆ ರೇರ್‌ಅರ್ಥ್ ಗಣಿಗಾರಿಕೆ ನಡೆಯುವಲ್ಲಿ ಹಲಕೆಲವು ಕಾರ್ಮಿಕರು ನಿರ್ವಂಶ ಆದಾರು!!       

Copyright: 2009 The Printers (Mysore) Private Ltd., 75, M.G. Road, Post Box No 5331, Bangalore – 560001

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.